ಬರ್ಕ್‍ಲೀ 2

	ಕ್ಯಾಲಿಫೋರ್ನಿಯ ರಾಜ್ಯದ ಅಲಮೇಡಾ ಜಿಲ್ಲೆಯ ಒಂದು ಪಟ್ಟಣ. ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಈಶಾನ್ಯ ದಂಡೆಯ ಮೇಲೆ ಇರುವ ಈ ಪಟ್ಟಣ 1933-37ರಲ್ಲಿ ಕಟ್ಟಿದ ಪ್ರಪಂಚದಲ್ಲೇ ಎರಡನೆಯದಾದ ಅತಿ ಉದ್ದದ ಗೊಲ್ಡನ್ ಗೇಟ್ ಸೇತುವೆಗೆ ನೇರ ಪೂರ್ವದಲ್ಲಿದೆ. ನಗರ ವಿಸ್ತೀರ್ಣ 45.9 ಚ.ಕಿ.ಮೀ. ಜನಸಂಖ್ಯೆ 102724 (2001).

	ಈ ಪಟ್ಟಣ 1820ರಲ್ಲಿ ಪೆರಾಲ್ಟ ಕುಟುಂಬಕ್ಕೆ ನೀಡಿದ್ದ ರ್ಯಾಂಕೊಸಾನ್ ಅಂಟೋನಿಯೊದ ಭಾಗವಾಗಿತ್ತು. 1853ರಲ್ಲಿ ಓಷನ್ ವ್ಯೂ ಎಂಬ ಹೆಸರಿನೊಂದಿಗೆ ಪಟ್ಟಣದ ಸ್ಥಾಪನೆಯಾಯಿತು. 1868ರಲ್ಲಿ ಸ್ಥಾಪಿತವಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಬಯಲನ್ನು ಬಿಷಪ್ ಜಾರ್ಜ್ ಬರ್ಕ್‍ಲಿ ಎಂಬಾತನ ಹೆಸರಿನಲ್ಲಿ 'ಬರ್ಕ್‍ಲೀ ಕ್ಯಾಂಪಸ್ ಎಂದು 1873ರಲ್ಲಿ ನಾಮಕರಣ ಮಾಡಲಾಯಿತು. 1878ರಲ್ಲಿ ಪೌರಸಭೆಯನ್ನು ಸ್ಥಾಪಿಸಲಾಯಿತು. ಸ್ಯಾನ್‍ಫ್ರಾನ್ಸಿಸ್ಕೋ ಭೂಕಂಪನದ ತರುವಾಯ (1906) ನಿರಾಶ್ರಿತರು ಬರ್ಕ್‍ಲೀ ಪಟ್ಟಣಕ್ಕೆ ಬಂದು ನೆಲಸಿದರು. 1909ರಲ್ಲಿ ಇದನ್ನು ನಗರವೆಂದು ಪರಿಗಣಿಸಲಾಯಿತು. 1923ರಲ್ಲಿ ಬೆಂಕಿ ಅನಾಹುತಕ್ಕೆ ಈಡಾಗಿ ಬರ್ಕ್‍ಲೀ ಪುನಾರಚನೆಗೊಂಡಿತು. ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಸೇತುವೆ ಕಟ್ಟಿದ ಮೇಲೆ ವಾಹನ ಸಂಚಾರಕ್ಕೆ ಅನುಕೂಲವಾಗಿ ಅನೇಕ ಕಾಲೇಜುಗಳು ಹಾಗೂ ವಾಣಿಜ್ಯಶಾಲೆಗಳು ಪ್ರಾರಂಭಿಸಲ್ಪಟ್ಟವು: 1918ರಲ್ಲಿ ಆರ್ಮಸ್ಟ್ರಾಂಗ್ ಕಾಲೇಜು ಸ್ಥಾಪನೆಯಾಯಿತು. ಬರ್ಕ್‍ಲೀ ಮತ್ಸ್ಯಸಂಗ್ರಹಾಲಯ ಇಲ್ಲಿಯ ಕೊಲ್ಲಿಗೆ ಎದುರಾಗಿದೆ. ಆಹಾರ ವಸ್ತುಗಳ ಪ್ಯಾಕಿಂಗ್, ಯಂತ್ರಗಳು. ಸೋಪು ಹಾಗೂ ಮೋಟಾರುವಾಹನಗಳ ತಯಾರಿಕೆ ಪಟ್ಟಣದ ಪ್ರಧಾನ ಕೈಗಾರಿಕೆಗಳು.

	ಇವಲ್ಲದೆ ದಕ್ಷಿಣ ಕರೊಲೀನ ಮತ್ತು ಪಶ್ಚಿಮ ವರ್ಜೀನಿಯ ರಾಜ್ಯಗಳಲ್ಲಿ ಬರ್ಕ್‍ಲೀ ಹೆಸರಿನ ಜಿಲ್ಲೆಗಳಿವೆ. ದಕ್ಷಿಣ ಕರೋಲೀನದ ಬರ್ಕ್‍ಲೀ, ಆ ರಾಜ್ಯದ ಆಗ್ನೇಯಕ್ಕಿದೆ. ವಿಸ್ತಾರ ಸುಮಾರು 2875 ಚ ಕಿಮೀ. ಪಶ್ಚಿಮ ವರ್ಜೀನಿಯದಲ್ಲಿರುವ ಬರ್ಕ್‍ಲೀ ರಾಜ್ಯದ ಈಶಾನ್ಯಕ್ಕಿದೆ. ವಿಸ್ತಾರ ಸುಮಾರು 818 ಚಕಿಮೀ. ಇಲಿನಾಯ್ಸ್ ರಾಜ್ಯದ ಕುಕ್ ಜಿಲ್ಲೆಗೆ ಸೇರಿದ ಬರ್ಕ್‍ಲಿ ಚಿಕಾಗೊ ನಗರದ ಪಶ್ಚಿಮಕ್ಕೆ ಸುಮಾರು 23 ಕಿಮೀ ದೂರದಲ್ಲಿರುವ ಒಂದು ಗ್ರಾಮ. ಮಿಸ್ಸೋರಿ ರಾಜ್ಯದ ಪೂರ್ವದಲ್ಲಿರುವ ಸೇಂಟ್ ಲೂಯಿ ಜಿಲ್ಲೆಯಲ್ಲಿರುವ ಬರ್ಕ್‍ಲೀ ಪಟ್ಟಣವನ್ನು 1937ರಲ್ಲಿ ನಗರವೆಂದು ಪರಿಗಣಿಸಲಾಯಿತು. 	 
 (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ